ಎಫಿಗ್ರಾಫಿಯ ಇಂಡಿಕ

	ಭಾರತ ದೇಶದ ಇತಿಹಾಸ-ಸಂಸ್ಕøತಿಗಳ ತಿಳಿವಳಿಕೆಗಾಗಿ ದೊರೆಯುವ ಅಸಂಖ್ಯಾತ ಶಾಸನಗಳ ಶಾಸ್ತ್ರೀಯ ಅಧ್ಯಯನಕ್ಕಾಗಿ ಸರ್ಕಾರದ ಸಹಾಯ ಮತ್ತು ನಿರ್ದೇಶನದಿಂದ ಪ್ರಕಟವಾಗುತ್ತಿರುವ ಪತ್ರಿಕೆ. ಮೊಟ್ಟಮೊದಲ ಸಂಚಿಕೆ ಕೇಂದ್ರಸರ್ಕಾರದ ಪುರಾತತ್ವಶಾಖೆಯ ಮಹಾನಿರ್ದೇಶಕನಾಗಿದ್ದ (ಡೈರೆಕ್ಟರ್ ಜನರಲ್ ಆಫ್ ಆರ್ಕಿಯಾಲಜಿ) ಜೇ. ಬರ್ಜೆಸನ ಸಂಪಾದಕತ್ವದಲ್ಲಿ 1888ರ ಅಕ್ಟೋಬರ್ ತಿಂಗಳಲ್ಲಿ ಪ್ರಕಟವಾಯಿತು. ಮೊದಲ ಸಂಪುಟ 1892ರಲ್ಲೂ ಎರಡನೆಯ ಸಂಪುಟ 1894ರಲ್ಲೂ ಪ್ರಕಟವಾದವು. ಇವೆರಡು ಸಂಪುಟಗಳು ಸೂಪರ್ ರಾಯಲ್ ಚತುಷ್ಪತ್ರದ ಆಕಾರದಲ್ಲಿವೆ. ಅವುಗಳಲ್ಲಿ ಸಂಸ್ಕøತ, ಪ್ರಾಕೃತ, ದ್ರಾವಿಡಭಾಷೆಗಳ ಶಾಸನಗಳನ್ನಲ್ಲದೆ ಅರಬ್ಬೀ ಮತ್ತು ಪರ್ಷಿಯನ್ ಶಾಸನಗಳನ್ನೂ ಪ್ರಕಟಿಸಲಾಗಿದೆ. ಅರಬ್ಬೀ ಮತ್ತು ಪರ್ಷಿಯನ್ ಶಾಸನಗಳ ಪ್ರಕಟಣೆಗಾಗಿ ಬೇರೆ ಏರ್ಪಾಡು ಮಾಡಬೇಕೆಂದೂ ಎಪಿಗ್ರಾಫಿಯ ಇಂಡಿಕದಲ್ಲಿ ಕೇವಲ ಸಂಸ್ಕøತ ಪ್ರಾಕೃತ ಹಾಗೂ ದ್ರಾವಿಡಭಾಷೆಗಳ ಶಾಸನಗಳನ್ನು ಪ್ರಕಟಿಸಬೇಕೆಂದೂ ಅನಂತರ ತೀರ್ಮಾನಿಸಲಾಯಿತು. ಈ ಪತ್ರಿಕೆಯ ಮೊದಲ ಸಂಪುಟಕ್ಕೆ ಸುಪ್ರಸಿದ್ಧ ಶಾಸನ ತಜ್ಞ (ಎಪಿಗ್ರಫಿಸ್ಟ್) ಹುಲ್ಷ್ ಸಹಾಯಕ ಸಂಪಾದಕನಾಗಿದ್ದ. ಈ ವಿದ್ವಾಂಸನ ಸಲಹೆಯಂತೆ ಎಪಿಗ್ರಾಫಿಯ ಇಂಡಿಕವನ್ನು ನಿಯತಕಾಲಿಕ ಪತ್ರಿಕೆಯಾಗಿ ಮೂರು ತಿಂಗಳಿಗೊಂದು ಸಂಚಿಕೆಯಂತೆ ಎಂಟು ಸಂಚಿಕೆಗಳನ್ನೊಳಗೊಂಡ ಸಂಪುಟವನ್ನು ಎರಡು ವರ್ಷಕ್ಕೊಮ್ಮೆ ಪ್ರಕಟಿಸಬೇಕೆಂದು ನಿರ್ಧರಿಸಲಾಯಿತು. ಪ್ರತಿಯೊಂದು ಸಂಚಿಕೆಯಲ್ಲಿ 48 ಪುಟಗಳಿರಬೇಕೆಂದೂ ಪ್ರತಿಯೊಂದು ಸಂಪುಟದ ಮೊದಲ ಏಳು ಸಂಚಿಕೆಗಳಲ್ಲಿ ಶಾಸನಗಳನ್ನೂ ಎಂಟನೆಯ ಸಂಚಿಕೆಯಲ್ಲಿ ಅವುಗಳ ವಿಷಯಸೂಚಿಯನ್ನೂ (ಇಂಡೆಕ್ಸ್) ಪ್ರಕಟಿಸಬೇಕೆಂದು ತೀರ್ಮಾನಿಸಲಾಯಿತು. ಪತ್ರಿಕೆಯ ಆಕಾರವನ್ನು ಡೆಮ್ಮಿ ಚತುಷ್ಪತ್ರಕ್ಕೆ ಬದಲಾಯಿಸಲಾಯಿತು. ಇದೇ ರೀತಿಯಲ್ಲಿ ಪತ್ರಿಕೆಯ ಪ್ರಕಟನೆ 1894ರಿಂದ 1908ರವರೆಗೆ ಅಂದರೆ ಮೂರನೆಯ ಸಂಪುಟದಿಂದ 9ನೆಯ ಸಂಪುಟದ ವರೆಗೆ ಹುಲ್ಷ್ ಪತ್ರಿಕೆಯ ಸಂಪಾದಕನಾಗಿ ಕೆಲಸಮಾಡಿ ಅದರ ಘನತೆಯನ್ನು ಹೆಚ್ಚಿಸಿದ. ತರುವಾಯ ಪತ್ರಿಕೆಯ ಸಂಪಾದಕತ್ವವನ್ನು 1906ರಲ್ಲಿ ಕೇಂದ್ರಸರ್ಕಾರದ ಶಾಸನತಜ್ಞನಾಗಿದ್ದ ಸ್ಟೆನ್ ಕೊನೊ ವಹಿಸಿಕೊಂಡ. ಅವನಾದ ಮೇಲೆ ಅನೇಕ ಭಾರತೀಯ ವಿದ್ವಾಂಸರು ಎಪಿಗ್ರಾಫಿಯ ಇಂಡಿಕದ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ವಿ. ವೆಂಕಯ್ಯ, ಎಚ್. ಕೃಷ್ಣ ಶಾಸ್ತ್ರಿ, ಹೀರಾನಂದಶಾಸ್ತ್ರಿ, ಕೆ. ಎನ್. ದೀಕ್ಷಿತ್, ಎನ್. ಸಿ. ಚಕ್ರವರ್ತಿ, ಬಿ. ಸಿ. ಛಾಬ್ರಾ, ಎನ್. ಲಕ್ಷ್ಮೀನಾರಾಯಣರಾವ್ ಮತ್ತು ಡಿ. ಸಿ. ಸರ್ಕಾರದಂಥ ಸುಪ್ರಸಿದ್ಧ ವಿದ್ವಾಂಸರ ಸಂಪಾದಕತ್ವದಲ್ಲಿ ನಡೆದ ಈ ಪತ್ರಿಕೆ ಉಚ್ಚಮಟ್ಟದ ಸಂಶೋಧನಾತ್ಮಕ ಪತ್ರಿಕೆಯೆಂದು ಇಡೀ ವಿಶ್ವದಲ್ಲಿ ಪ್ರಸಿದ್ಧಿಯನ್ನು ಪಡೆದಿದೆ. ಮೇಲೆ ಹೆಸರಿಸಿರುವ ಸಂಪಾದಕರಲ್ಲದೆ, ಈ ಪತ್ರಿಕೆಯಲ್ಲಿ ಜಿ. ಬ್ಯೂಲರ್, ಎಫ್. ಕೀಲ್‍ಹಾರ್ನ್, ಜೆ. ಎಫ್. ಫ್ಲೀಟ್, ಎಲ್. ಡಿ. ಬಾರ್ನೆಟ್, ಎಚ್. ಲ್ಯುಡರ್ಸ್ ಮುಂತಾದ ಪಾಶ್ಚಾತ್ಯ ವಿದ್ವಾಂಸರೂ ಡಿ. ಆರ್. ಸಾಹನಿ, ಡಿ.ಆರ್. ಭಾಂಡಾರಕರ್ ಆರ್. ಡಿ ಬ್ಯಾನರ್ಜಿ, ಎನ್. ಜಿ. ಮುಜುಂದಾರ್, ಆರ್. ಸಿ. ಮುಜುಂದಾರ್, ಕೆ. ವಿ. ಸುಬ್ರಹ್ಮಣ್ಯ ಅಯ್ಯರ್, ಎ. ಎಸ್. ಅಳ್ತೇಕರ್, ಸಿ. ಆರ್. ಕೃಷ್ಣಮಾಚಾರ್ಲು, ವಿ.ವಿ. ಮಿರಾಶಿ ಮತ್ತು ಆರ್. ಎಸ್. ಪಂಚಮುಖಿ ಮುಂತಾದ ಭಾರತೀಯ ವಿದ್ವಾಂಸರೂ ಅನೇಕ ಮಹತ್ತ್ವದ ಶಾಸನಗಳನ್ನೂ ಅವುಗಳ ಬಗ್ಗೆ ವಿದ್ವತ್ಪೂರ್ಣ ಲೇಖನಗಳನ್ನೂ ಪ್ರಕಟಿಸಿದ್ದಾರೆ. 1963ರಿಂದ ಈಚೆಗೆ ಪತ್ರಿಕೆಯ ಸಂಪಾದಕ ಜಿ. ಎಸ್. ಗಾಯ್. ಇದುವರೆಗೆ 15,000 ಕ್ಕಿಂತಲೂ ಹೆಚ್ಚಿನ ಪುಟಗಳನ್ನೊಳಗೊಂಡ 36 ಸಂಪುಟಗಳೂ 37ನೆಯ ಸಂಪುಟದ 6 ಸಂಚಿಕೆಗಳೂ ಪ್ರಕಟವಾಗಿವೆ. ಇಡೀ ದೇಶದಲ್ಲಿ ಕೇವಲ ಶಾಸನಗಳ ಪ್ರಕಟನೆಗಾಗಿಯೇ ಮೀಸಲಾಗಿರುವ ಏಕೈಕವಾದ ನಿಯತಕಾಲಿಕ ಪತ್ರಿಕೆಯಾದ ಎಫಿಗ್ರಾಫಿಕ್ ಇಂಡಿಕ ಭಾರತೀಯ ಇತಿಹಾಸ-ಸಂಸ್ಕøತಿಗಳ ಶಾಸ್ತ್ರೀಯ ಅಧ್ಯಯನಕ್ಕೆ ಅವಶ್ಯವಾದ ಮೂಲಸಾಮಗ್ರಿಗಳನ್ನೊದಗಿಸಿ ಕೊಡುವ ಅತ್ಯಮೂಲ್ಯವಾದ ಸಾಧನವಾಗಿದೆ.									
   (ಜಿ.ಎಸ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ